ಚಟ್ಟೋಪಾಧ್ಯಾಯ, ಶರತ್‍ಚಂದ್ರ

1876-1938. ಬಂಗಾಳದ ಅಗ್ರಮಾನ್ಯ ಕಾದಂಬರಿಕಾರರಲ್ಲಿ ಒಬ್ಬ. ರಾಷ್ಟ್ರೀಯ ಕಾಂಗ್ರೆಸ್ಸಿನ ಚಟುವಟಿಕೆಯಲ್ಲೂ ಪ್ರಮುಖ ಪಾತ್ರವಹಿಸಿದವ. ವಿಚಿತ್ರ ಘಟನಾವಳಿಗಳಿಂದ ಕೂಡಿದ ಈತನ ಜೀವಿತ ಗಮನಾರ್ಹವಾಗಿದೆ. ಅದನ್ನು ಮೂರು ಮುಖ್ಯ ಘಟ್ಟಗಳಲ್ಲಿ ನೋಡಬಹುದು; ಬಾಲ್ಯಾನಂತರ ಭಾಗಲ್ಪುರದಲ್ಲಿ ಕಳೆದ ಸುಮಾರು 17 ವರ್ಷಗಳು, ಆನಂತರ ಬರ್ಮಾದಲ್ಲಿ ಕಳೆದ 12 ವರ್ಷಗಳು, ಕೊಲ್ಕತ್ತಾದಲ್ಲಿನ ಕಡೆಯ 22 ವರ್ಷಗಳು. ಶರಚ್ಚಂದ್ರನ ತಂದೆ ಮತಿಲಾಲ ಚಟ್ಟೋಪಾಧ್ಯಾಯ ಸಾಧಾರಣ ಸ್ಥಿತಿಯ ಒಬ್ಬ ಬ್ರಾಹ್ಮಣ. ಆತನಿಗೆ ಸಾಹಿತಿಯಾಗಬೇಕೆಂಬ ಚಪಲ. ಕಥೆ ಕಾದಂಬರಿ ಪದ್ಯ ನಾಟಕವೆಲ್ಲಕ್ಕೂ ಕೈಹಾಕಿ ಏನೊಂದನ್ನೂ ಮುಗಿಸದೆ, ಪ್ರಕಟಿಸದೆ ನಿಂತ; ಅವನ ಅಸ್ತಿಮಿತತೆಯೇ ಅದಕ್ಕೆ ಕಾರಣ. ಅಪ್ಪ ತನ್ನ ಲೇಖನಚಟ, ಅಸ್ಥಿರ ಬುದ್ಧಿ ಎರಡನ್ನೂ ಮಗನಿಗೆ ದತ್ತಿ ಬಿಟ್ಟುಹೋದ. ಶರತ್‍ಚಂದ್ರನ ತಾಯಿ ಭಾಗಲ್ಪುರದ ಪ್ರಸಿದ್ಧ ಗಂಗೂಲಿ ಮನೆತನಕ್ಕೆ ಸೇರಿದವಳು: ಸಹೋದರರ ಉಸ್ತುವಾರಿಯಲ್ಲಿ ಓದಿ ಮುಂದಕ್ಕೆ ಬರಲೆಂದು ಹತ್ತು ವರ್ಷದ ತನ್ನ ಮಗನನ್ನು ಆಕೆ ಭಾಗಲ್ಪುರಕ್ಕೆ ಕಳಿಸಿದಳು. ಆದರೆ ಮಗ ಅಲ್ಲಿ ವ್ಯಾಸಂಗದ ಕಡೆಗೆ ಶ್ರದ್ಧೆ ತೋರಿಸಲಿಲ್ಲ. ಅಲೆಮಾರಿಯಾಗಿ, ಕಾಲ ತಳ್ಳುವುದರಲ್ಲಿ ನಿಪುಣನಾದ. ಹೇಗೋ ಪ್ರವೇಶ ಪರೀಕ್ಷೆಯನ್ನು ದಾಟಿ ಎಫ್.ಎ.ಗೆ ಅರ್ಹತೆ ಪಡೆಯಲು ಯತ್ನಿಸುವಾಗಲೇ ವಿದ್ಯಾಭ್ಯಾಸ ಅವನಿಗೆ ಸಾಕುಸಾಕಾಗಿ ಹೋಯಿತು. ಆನಂತರ ಶ್ರೀಮಂತರಲ್ಲಿ ಗುಮಾಸ್ತನಾಗಿ, ಸಾಧುವಿನ ವೇಷದಲ್ಲಿ ಸಂಚರಿಸುತ್ತ, ಕೊನೆಗೆ ಬಿಹಾರದ ಒಬ್ಬ ಭೂಮಾಲೀಕನ ಬಳಿ ಕೆಲಸ ಮಾಡುತ್ತ ಬೆಳೆದ. ಏತನ್ಮಧ್ಯೆ ಬಿಭೂತಿ ಭೂಷಣ ಭಟ್ಟ ಎಂಬ ಗೆಳೆಯನೊಂದಿಗೆ ಸೇರಿ ಒಂದು ಸಾಹಿತ್ಯ ಸಂಘವನ್ನು ಛಾಯಾ ಎಂಬ ಕೈ ಬರಹದ ಪತ್ರಿಕೆಯನ್ನೂ ಸ್ಥಾಪಿಸಿದ. ಬಂಕಿಮಚಂದ್ರ ಮೊದಲಾದವರ ಕೃತಿಗಳನ್ನು ಪಠಿಸುವುದೆಂದರೆ ಈತನಿಗೆ ವಿಶೇಷ ಉತ್ಸಾಹ, ಸಾಹಿತಿಯಾಗಿದ್ದ ಸೋದರಮಾವ ಉಪೇಂದ್ರನಾಥ ಗಂಗೂಲಿಯಿಂದಾಗಿ ಈತನಿಗೂ ಸಾಹಿತ್ಯಯದ ಆಕರ್ಷಣೆ ತಟ್ಟಿತು.

1903ರಂದು ಮತಿಲಾಲ ದೈವಾಧೀನನಾದ. ಕೂಡಲೆ ಶರತ್ ಕೊಲ್ಕತ್ತೆಗೆ ಪ್ರಯಾಣ ಮಾಡಿ, ಮಾರನೆಯ ವರ್ಷ ರಂಗೂನಿಗೆ ವಲಸೆ ಹೋದ. ಈತನ ಸೋದರತ್ತೆ ಮತ್ತು ಆಕೆಯ ಪತಿ ಈತನಿಗೆ ನೆರವು ನೀಡಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ದೊರಕಿಸಿಕೊಟ್ಟರು. ರೈಲ್ವೆಯಲ್ಲೊ ಸರ್ಕಾರದ ಲೋಕೋಪಯೋಗಿ ಶಾಖೆಯಲ್ಲೊ ಚಾಕರಿ ಮಾಡುತ್ತ ಒಟ್ಟು 12 ವರ್ಷ ಬರ್ಮಾದಲ್ಲಿ ಈತ ನೆಲಸಿದ್ದ. ಅಂಕೆಗಿಂಕೆಯಿಲ್ಲದೆ ಸ್ವೇಚ್ಛಾಚಾರ ಈತನ ದಿನಚರಿಯಾಗಿದ್ದರೂ ನಾನಾ ವಿಷಯಗಳ ಮೇಲಣ ಗ್ರಂಥಗಳನ್ನು ಮನಸ್ಸಿಟ್ಟು ಅಧ್ಯಯನ ಮಾಡಿ ಜ್ಞಾನಾರ್ಜನೆ ಮಾಡಿಕೊಂಡ, ಅಲ್ಲದೆ ಪ್ರಬಂಧ ಇತ್ಯಾದಿಗಳನ್ನು ರಚಿಸಿ ಕೊಲ್ಕತ್ತೆಗೆ ರವಾನಿಸುತ್ತಿದ್ದ; ಅವನ್ನು ಭಾರತಿ, ಯಮುನಾ, ಬಂಗಭಾಷಿ ಮುಂತಾದ ಪತ್ರಿಕೆಗಳು ಪ್ರಕಟಿಸುತ್ತಿದ್ದುವು. ಶರತ್‍ಚಂದ್ರ ಕೆಲವೊಮ್ಮೆ ಸುರೇಂದ್ರನಾಥ ಗಂಗೂಲಿ ಅನಿಲಾದೇವಿ ಮುಂತಾದ ಕಾವ್ಯನಾಮಗಳನ್ನು ಇಟ್ಟುಕೊಳ್ಳುತ್ತಿದ್ದ. 1912ರಂದು ಏತಕ್ಕೊ ಕೊಲ್ಕತ್ತೆಗೆ ಬಂದಿದ್ದಾಗ ಶಾಂತಿದೇವಿ ಎಂಬ ಕನ್ಯೆಯನ್ನು ಮದುವೆಯಾದ; ಅವಳಿಗೆ ಬೇಗ ಸಾವು ಬಂತು. ರಂಗೂನಿಗೆ ಹಿಂತಿರುಗಿ 1913ರಂದು ಹಿರಣ್ಮಯೀ ದೇವಿ ಎಂಬಾಕೆಯನ್ನು ಕೈಹಿಡಿದ. 1916ರಲ್ಲಿ ಬರ್ಮವನ್ನು ತ್ಯಜಿಸಿ ಕೊಲ್ಕತ್ತಗೆ ಬಂದು ಅಲ್ಲಿಯೆ ಬೀಡುಬಿಟ್ಟ. ಸಾಹಿತ್ಯವನ್ನೇ ವೃತ್ತಿಯನ್ನಾಗಿಸಿಕೊಂಡು ಅದರ ವರಮಾನದಿಂದ ಸುಖಸೌಕರ್ಯದ ಜೀವನ ನಡೆಸಿದ ಗ್ರಂಥಕರ್ತರಲ್ಲಿ ಈತನೇ ಮೊದಲಿಗನೆಂದು ಎಣಿಸಲಾಗಿದೆ. 1934ರಲ್ಲಿ ಪತ್ನಿಯ ಬಯಕೆ ಸಲ್ಲಿಸಲು ಇನ್ನೊಂದು ಭವನವನ್ನು ಕಟ್ಟಿಸಿದ. ಮುಂದೆ ನಾಲ್ಕು ಸಂವತ್ಸರ ಬಾಳಿ 1938ರಲ್ಲಿ ಜನವರಿ 16ರಂದು ತೀರಿಕೊಂಡ.

ಕೊಲ್ಕತ್ತೆಗೆ ಬಂದದ್ದೇ ತಡ ಶರತ್ ಚಂದ್ರ ರಾಜಕೀಯದ ಸೆಳೆತಕ್ಕೆ ಸಿಕ್ಕಿದ. 1917ರಲ್ಲಿ ಚಿತ್ರರಂಜನ ದಾಸನನ್ನು ತನ್ನ ಗುರುವಾಗಿ ಸ್ವೀಕರಿಸಿದ. 1921ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯನಾಗಿ ಹೌರ ಜಿಲ್ಲಾಸಮಿತಿಗೆ ಅಧ್ಯಕ್ಷನಾದ, ದಾಸನ ಸೂಚನೆಯಂತೆ ಹೆಂಗಸರ ಕಾರ್ಯಕಲಾಪಗಳಿಗಾಗಿ ನಾರೀಕರ್ಮ ಮಂದಿರ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ. ಹಲವು ನಾಯಕರಿಗೆ ಹತ್ತಿರದವನಾಗಿ ಮಹಾತ್ಮ ಗಾಂಧೀಜಿಯ ಬೆಂಬಲಿಗನಾಗಿ ಬಹಳಷ್ಟು ಸಮಾಜಸೇವೆ ಸಲ್ಲಿಸಿದ. ಗಾಂಧೀಜಿಗೆ ಒಮ್ಮೆ ಈತ ಹೀಗೆಂದನಂತೆ: 'ನೂಲುವುದನ್ನು ನಾನು ಕಲಿತೆ, ಚರಕದ ಒಲುಮೆಯಿಂದಲ್ಲ, ನಿನ್ನ ಕುರಿತು ಒಲುಮೆಗೋಸ್ಕರ.' ಶಾಲಾ ಕಾಲೇಜು ಬಹಿಷ್ಕರಿಸಿ ಬನ್ನಿ ಎಂಬ ಕರೆ ಗಾಂಧೀಜಿಯಿಂದ ಘೋಷಿತವಾದಾಗ ರವೀಂದ್ರನಾಥ ಠಾಕೂರರು ಅದಕ್ಕೆ ಆಕ್ಷೇಪ ಎತ್ತಿದರಂತೆ; ತತ್‍ಕ್ಷಣ ಶರತ್‍ಚಂದ್ರ ತನಗೆ ಸಾಹಿತ್ಯಿಕ ದಾರಿ ತೋರುಗರಲ್ಲಿ ಒಬ್ಬರಾಗಿದ್ದರೂ ಅವರನ್ನು ಖಂಡಿಸಿದ. ಕ್ರಾಂತಿಕಾರೀ ಗುಂಪನ್ನು ಕಂಡರೂ ಶರತ್‍ಚಂದ್ರನಿಗೆ ಸಹಾನುಭೂತಿ ಇತ್ತು. ಅವರಲ್ಲಿ ಕೆಲವರು 1927ರಂದು ಜೈಲಿನಿಂದ ಹೊರಬಂದಾಗ ಅವರಿಗೆ ಹಾರ್ದಿಕ ಸತ್ಕಾರ ಏರ್ಪಡಿಸಿದ, ಅಸ್ಪøಶ್ಯತೆ ಇರಕೂಡದೆಂದೇ ಈತನ ತೀವ್ರವಾದ; ದೀನ ದಲಿತರ ವಿಷಯವಾಗಿ ಈತನ ಎದೆ ಸದಾ ಕರಗುತ್ತಿತ್ತು. ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳನ್ನು ಚರ್ಚಿಸಿ ಈತ ಮೂರು ಪುಸ್ತಕ ಬರೆದ; ನಾರೀರ್ ಮೂಲ್ಯ (1923), ತರುಣರ್ ವಿದ್ರೋಹ (1929), ಸ್ವದೇಶ್ ಒ ಸಾಹಿತ್ಯ (1932). ಅಲ್ಲದೆ ತನ್ನ ಕೆಲವು ಪ್ರಬಂಧಗಳಲ್ಲೂ ಕುಶಲ ಪತ್ರಗಳಲ್ಲೂ ಆ ಪ್ರಶ್ನೆಗಳನ್ನು ಪ್ರಸ್ತಾವಿಸಿದ.

ಈತನ ಕೃತಿಗಳ ಸಂಖ್ಯೆ 44. 1903ರಲ್ಲಿ ಬಂದ ಮೊಟ್ಟ ಮೊದಲ ಕಥೆ-ಮಂದಿರ್, ಅದಕ್ಕೆ ಕುಂತಳ ಬಹುಮಾನ ಸಿಕ್ಕಿತು. ನುರಿತ ಹಿರಿಯ ಸಾಹಿತಿ ಜಾಧವ ಸೇನ್ ತೀರ್ಪುಗಾರನಾಗಿದ್ದ. ಎರಡನೆಯ ಕಥೆ ಬಡಾದೀದಿ (1907) ಅಷ್ಟೊಂದು ಸಮರ್ಪಕವಲ್ಲವೆಂದು ತಜ್ಞರ ಅಭಿಪ್ರಾಯ. ರಾಮೆರ್ ಸುಮತಿ (1914), ಪಥನಿರ್ದೇ ಶ, ಬಿಂದೂರ್ ಚೇಲೆ (1913) ಎಂಬ ಮೂರು ಕಥೆಗಳು ಮೆಚ್ಚಿಕೆ ಪಡೆದಿವೆ. ಈತನ ಅತ್ಯುತ್ತಮ ಕಾದಂಬರಿ ಚರಿತ್ರಹೀನ; ಅದರಲ್ಲಿ ಸುಶಿಕ್ಷಿತನೂ ಕುಲೀನನೂ ಆದ ಒಬ್ಬ ಯುವಕನಿಗೆ ಊಟದ ಹೋಟೆಲಿನಲ್ಲಿ ದಾಸಿಯಾಗಿರುವ ಒಬ್ಬ ವಿಧವೆಯ ಮೇಲೆ ಪ್ರೇಮ ಉಂಟಾಗುತ್ತದೆ. ಅದು ಫಲಿಸದ ಪ್ರಣಯ, ಇದರ ಹಸ್ತಪ್ರತಿಯನ್ನು ಶರತ್‍ಚಂದ್ರ ಮೊದಲು ಭಾರತವರ್ಷ ಎಂಬ ಖ್ಯಾತ ಪ್ರತಿಕೆಗೆ ಕಳಿಸಿದ; ಸಂಪಾದಕ ದ್ವಿಜೇಂದ್ರಲಾಲ ರಾಯ್ ಅದನ್ನು ಪ್ರಕಟಿಸಲು ನಿರಾಕರಿಸಿದ. ಕಾಲಾನಂತರ ಶರತ್‍ಚಂದ್ರ ಯಮುನಾ ಪತ್ರಿಕೆಗೆ ಸಹಸಂಪಾದಕನಾದಾಗ ಅದು ಮುದ್ರಣಗೊಂಡಿತು. ಅಷ್ಟೇಕೆ, ರಮಾನಂದ ಚಟರ್ಜಿ ಸಂಪಾದಿತ ಪ್ರವಾಸೀ ಆ ಸಮಯದಲ್ಲಿ ಹೆಸರಾಂತ ಪತ್ರಿಕೆಯಾಗಿತ್ತು. ಅದರಲ್ಲಿ ಠಾಕೂರರ ಕೃತಿಗಳು ಪ್ರಕಟವಾದುವೇ ವಿನಾ ಶರತ್‍ಚಂದ್ರನ ಒಂದು ಕೃತಿಯೂ ಪ್ರಕಟವಾಗಲಿಲ್ಲ, ಇದೊಂದು ಸೋಜಿಗದ ಸಂಗತಿ.

ಶರತ್‍ಚಂದ್ರ ದೊಡ್ಡ, ಮಧ್ಯಮ, ಚಿಕ್ಕ ಗಾತ್ರದ ಹಲವು ಕಾದಂಬರಿಗಳನ್ನು ಬರೆದ ಪಂಡಿತ ಮಹಾಶಯ (1914), ಹಳ್ಳಿ ಸಮಾಜ (1916), ಗೃಹದಾಹ (1920), ಶ್ರೀಕಾಂತ I, II, III (1922 ಮುಂದೆ), ನಾನು ಮಾಧವಿ, ಶೇಷಪ್ರಶ್ನೆ (1931), ಭೈರವಿ, ವಿಪ್ರದಾಸ್, ವಿರಾಜ್ ಬಹೂ, ಚಂದ್ರನಾಥ್, ಅರಕ್ಷಣೀಯ, ಮಹೇಶ, ನವ ವಿಧಾನ್, ನಿಷ್ಕøತಿ ಇತ್ಯಾದಿ ಅಲ್ಲದೆ ನಾಲ್ಕೈದು ಪ್ರಬಂಧಗಳೂ ಪತ್ರಗಳೂ ಈತನಿಂದ ರಚಿತವಾದುವು. ಹೆಣ್ಣಿನ ಸ್ಥಾನಮಾನದ ಸಮಸ್ಯೆ ಈತನ ಚಿತ್ರದಲ್ಲಿ ಸದಾ ಮಿಡಿದಾಡುತ್ತಿತ್ತು. ಅದನ್ನು ಕುರಿತು ಈತ ತಯಾರಿಸಿದ ಪ್ರಬಂಧ ಗಮನಾರ್ಹ. ಇಲ್ಲಿ ತೀವ್ರ ರಾಗದಿಂದ ಪೂರಿತನಾಗಿದ್ದರೂ ಶರತ್‍ನ ತರ್ಕವಿಚಕ್ಷಣೆಗೂ ಸ್ವಂತ ಆಲೋಚನೆಗೂ ಧಕ್ಕೆ ತಟ್ಟಿಲ್ಲ.

ಹಲವು ಸನ್ಮಾನಗಳು ಈತನಿಗೆ ಲಭಿಸಿದವು, 1923ರಲ್ಲಿ ಸೃಜನಸಾಹಿತ್ಯಕ್ಕೆ ಮೀಸಲಾಗಿದ್ದ ಜಗತ್ತಾರಿಣಿ ಸ್ವರ್ಣಪದಕವನ್ನು ಕಲ್ಕತ್ತ ವಿಶ್ವವಿದ್ಯಾಲಯ ಈತನಿಗೆ ಕೊಡಲು ತೀರ್ಮಾನಿಸಿತು. 1934ರಂದು ಈತನನ್ನು ವಂಗೀಯ ಸಾಹಿತ್ಯ ಪರಿಷತ್ತು ವಿಶೇಷ ಸದಸ್ಯನಾಗಲು ಆಹ್ವಾನಿಸಿತು. 1936ರಲ್ಲಿ ಈತನ ಹುಟ್ಟಿದ ಹಬ್ಬದ ದಿವಸ ರವೀಂದ್ರನಾಥ ಠಾಕೂರರು ಈತನನ್ನು ಅಭಿನಂದಿಸಿ ಕಾಗದ ಬರೆದರು. ಅದೇ ವರ್ಷ ಢಾಕ ವಿಶ್ವವಿದ್ಯಾಲಯದ ಡಿ.ಲಿಟ್. ಪ್ರಶಸ್ತಿ ಲಭಿಸಿತು.

ನಾನಾ ವರ್ಗದ ನಾನಾ ಸ್ಥಿತಿಗತಿಯ ನಾನಾ ಜಾಯಮಾನದ ಪಾತ್ರಗಳ ನಿರ್ಮಾಣ ಶರತ್ ಚಂದ್ರನ ಮುಖ್ಯ ಲಕ್ಷಣ; ಅವುಗಳ ಅಂತರ್ಯದಲ್ಲಿ ಎದ್ದು ಕುದಿಯುವ ತುಯ್ತ ತಿಕ್ಕಾಟ ಆಶೆ ನಿರಾಸೆ ಸಂತೋಷ ಅಸಂತೋಷಗಳ ಜಾಲವನ್ನು ಆತ ಮನವೊಪ್ಪುವಂತೆಯೂ ಹೃದಯಸ್ಪರ್ಶಿಯಾಗಿಯೂ ಚಿತ್ರಿಸಬಲ್ಲ, ಸ್ತ್ರೀಪಾತ್ರ ಸೃಷ್ಟಿಯಲ್ಲಿ ಪ್ರವೀಣನೆಂಬ ಕೀರ್ತಿ ಆತನಿಗೆ ಸಂದಿದೆ. ಆತ ಸೃಜಿಸಿದ ಸ್ತ್ರೀಪಾತ್ರಗಳು ಜೀವಂತವಾದವು; ಅನುಕಂಪೆ ಅಚ್ಚರಿ ಕೊನೆಗೆ ಅನುರಾಗ-ಇವನ್ನು ಪ್ರಚೋದಿಸತಕ್ಕವು. ಆದರೆ ಸಾವಿತ್ರಿ ಅಚಲಾ ಕಿರಣ್ಮಯಿ ಮುಂತಾದ ಅಪೂರ್ವ ವನಿತೆಯರನ್ನು ಕುರಿತು ವಿಚಾರಗೈಯುವಾಗ ಅವುಗಳ ಒಂದೆರಡು ಘಟಕಾಂಶ ನಾರೀಸಹಜವಲ್ಲವೇನೊ ಎಂಬ ಶಂಕೆ ಉಂಟಾಗುತ್ತದೆ. ಬಹುಶಃ ಆತ್ಮೀಯತೆಯ ಅತಿರೇಕಕ್ಕೆ ಪಕ್ಕಾಗಿ ಶರತ್ ಚಂದ್ರ ತಾನೇ ಅವುಗಳಾಗಿ ನಡೆನುಡಿ ನಡೆಸಿದಂತೆ ಭಾಸವಾದರೂ ಆಗಬಹುದು.

ಕಥಾಸಂವಿಧಾನ ಒಟ್ಟಿನಲ್ಲಿ ಸಮರ್ಪಕವಾಗಿದ್ದರೂ ಆಗ ಈಗ ಜರಗುವ ಅನಿರೀಕ್ಷಿತ ಆಗಮನ ನಿರ್ಗಮನ ಸ್ವಲ್ಪಮಟ್ಟಿಗೆ ಕೃತಕವಾಗಿ ತೋರುತ್ತವೆ. ಶರತ್‍ಚಂದ್ರ ವಾಸ್ತವಿಕತೆಯ ಹಿಂಬಾಲಕನಾದ್ದರಿಂದ ಈ ಮಾತನ್ನು ಆಡಲೇಬೇಕು. 

ಶರತ್‍ನ ಬಹುಪಾಲು ಕಥೆ ಕಾದಂಬರಿಗಳು ಕನ್ನಡ ಮತ್ತು ಇತರ ಭಾರತೀಯ ಭಾಷೆಗಳಿಗೆ ಅನುವಾದವಾಗಿವೆ.
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ